[click on the image to enlarge]
A tribute to Smt.Parvathamma Rajkumar
ಪಾರ್ವತಿಯ ಒಂದು ಮುತ್ತಿನ ಕಥೆ
ರಚನೆ: ಬೆಳ್ಳೂರು ರಾಮಕೃಷ್ಣ
ಪರ್ವತ ರಾಜನ ಮಗಳು ಆ ಪಾರ್ವತಿ
ಪರ್ವತದಷ್ತು ಎತ್ತರ ಬೆಳೆದ ನಮ್ಮ ರಾಜಣ್ಣನ ಮಡದಿ ಈ ಪಾರ್ವತಿ
ತ್ರಿದೇವಿಯ ಸೃಷ್ಟಿಗೆ ಕಾರಣ ಸರಸ್ವತಿ-ಲಕ್ಷ್ಮೀ-ಪಾರ್ವತಿ
ತ್ರಿಮೂರ್ತಿಯ ಸೃಷ್ಟಿಗೆ ಕಾರಣ ಈ ಪಾರ್ವತಿ
ಸದಾಶಿವನಧ್ಯಾನದಲ್ಲೇ ಇರುವಳು ಆ ಪಾರ್ವತಿ
ಸದಾಶಿವನಗರದಲ್ಲೇ ನೆಲಸಿದ್ದು ಈ ಪಾರ್ವತಿ
ಕಣ್ಣಪ್ಪನ ಒಡೆಯನ ಮಡದಿ ಆ ಪಾರ್ವತಿ
ಕಣ್ಣಪ್ಪನ ಮಡದಿ ಈ ಪಾರ್ವತಿ
ಅಲ್ಲಿ ಅವಳು ಇಲ್ಲಿ ಇವಳು
ಇಬ್ಬರೂ ತೋರಿದ್ದು ಸತಿ ಶಕ್ತಿಯನ್ನು
ದಕ್ಷನ ಮಗಳು ಸತಿ… ಅವಳೇ ಪಾರ್ವತಿ
ದಕ್ಷತೆಯಿಂದ ಕಾರ್ಯನಿರ್ವಹಿಸಿದಳು ಈ ಪಾರ್ವತಿ
ಆ ಪಾರ್ವತಿಯ ಮಗನೇ ಷಣ್ಮುಖ
ಈ ಪಾರ್ವತಿಯ ಮೊಮ್ಮಗನೇ ಷಣ್ಮುಖ
ಶಿವನಿಗೆ ಅಪ್ಪುಗೆ ನೀಡಿದನು ಆ ರಾಘವ
ಶಿವಣ್ಣನಿಗೆ ಅಪ್ಪುಗೆ ನೀಡಿದನು ಈ ರಾಘವ
ಗಿರಿ ಕನ್ಯೆ ಅಂದರೆ ಪಾರ್ವತಿಯಲ್ಲವೇ
ಗಿರಿ ಕನ್ಯೆ ಹೊರತಂದದ್ದು ಈ ಪಾರ್ವತಿಯಲ್ಲವೇ
ಆ ಪಾರ್ವತಿಯ ದೃಷ್ಟಿಯಲ್ಲಿ ಶಂಕರ ಗುರು
ಈ ಪಾರ್ವತಿ ಸೃಷ್ಟಿಸಿದ್ದು ಶಂಕರ ಗುರು
ಆ ಪಾರ್ವತಿಗೆ ಇಷ್ಟ ಪತಿಯ ಹಾವಿನ ಹೆಡೆ
ಈ ಪಾರ್ವತಿಗೆ ಇಷ್ಟ ಪತಿಯ ಹಾವಿನ ಹೆಡೆ
ಬೆಟ್ಟದ ಹೂವಿನಿಂದ ದೊರಕಿತು ಅವಳಿಗೆ ಪತಿಯ ಮನ್ನಣೆ
ಬೆಟ್ಟದ ಹೂವಿನಿಂದ ದೊರಕಿತು ಇವಳ ಮಗನಿಗೆ ರಾಷ್ಟ್ರ ಮನ್ನಣೆ
ಆ ನಂಜುಂಡಿಯ ಕಲ್ಯಾಣಕ್ಕೆ ಕಾರಣ ಆ ಪಾರ್ವತಿ
ಈ ನಂಜುಂಡಿಯ ಕಲ್ಯಾಣಕ್ಕೆ ಕಾರಣ ಈ ಪಾರ್ವತಿ
ಅನೇಕ ದೇವಿಮಣಿಗಳು ಹೊರಹೊಮ್ಮಿದ್ದು ಆ ಪಾರ್ವತಿಯ ಕೃಪಾಕಟಾಕ್ಷದಿಂದ
ಅನೇಕ ನಟಿಮಣಿಗಳು ಹೊರಹೊಮ್ಮಿದ್ದು ಈ ಪಾರ್ವತಿಯ ಕೃಪಾಕಟಾಕ್ಷದಿಂದ
ಆ ಪಾರ್ವತಿ ಹುಟ್ಟಿದ್ದು ಹಿಮಾಲಯದಲ್ಲಿ
ಈ ಪಾರ್ವತಿ ಸಾಧಿಸಿದ್ದು ಹಿಮಾಲಯದಷ್ಟು
ಸಾಲಿಗ್ರಾಮವನ್ನು ಪೂಜಿಸಿದರೆ ಇರುವುದಿಲ್ಲ ಪುನರ್ಜನ್ಮ
ಸಾಲಿಗ್ರಾಮದಲ್ಲೇ ಹುಟ್ಟಿದರೆ ಇರುವುದೇ ಪುನರ್ಜನ್ಮ
ಜಗತ್ತನ್ನು ನಡೆಸುವಳು ಆ ಪಾರ್ವತಮ್ಮ
ಚಿತ್ರ ಜಗತ್ತನ್ನು ನಡೆಸಿದಳು ಈ ಪಾರ್ವತಮ್ಮ
ಜಗದೊಡೆಯ ಕಂಠೀರವನೊಡನೆ ಸ್ವರ್ಗ ಕಂಡಳು ಆ ಪಾರ್ವತಿ
ರಣಧೀರ ಕಂಠೀರವನೊಡನೆ ಇರಲು ಸ್ವರ್ಗ ಕಾಣಲು ಹೊರಟಳು ಈ ಪಾರ್ವತಿ
