
ಮಿತ್ರರೊಂದಿಗೆ ವಾಕ್-athon !
ವರದಿ ಒಪ್ಪಸ್ತಿರೋದು: ದಿನವೆಲ್ಲ ಅಂದು ಕೂತು ಅವಾಕ್ ಆದವರಲ್ಲಿ ಒಬ್ಬನಾದ – ರಾಂಕಿ ಬೆಳ್ಳೂರ್
ಭಾರತೀಯ ವಿದ್ಯಾ ಭವನದ ಖಿನ್ಚ ಸಭಾಂಗಣದಲ್ಲಿ ಅಂದು ರವಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಹಿತವಾದ ಬಿಸಿಲು…ಯಾಕೆ ಹೇಳಿ? ಮಿತ್ರರಿದ್ದರೆ ಬಿಸಿಲಿರಲೇ ಬೇಕಲ್ವೇ ! ..ರವಿಯೇ ಮಿತ್ರ. ಸಮಯಕ್ಕೆ ಸರಿಯಾಗಿ ಆಗಮಿಸಿದ ಮಿತ್ರ ದಂಪತಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಅನೇಕ ಮಿತ್ರರು, ಒಡನಾಡಿಗಳನ್ನು ಕಂಡು ‘ಮಿತ್ರ’ರು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಾ ವೇದಿಕೆಯತ್ತ ಸಾಗಿದರು.ಲಿಟ್ರಲಿ, ನಾವೆಲ್ಲ ಮಿತ್ರಕೂಟದಲ್ಲಿದ್ದೆವು !
ತೊಂಬತ್ತು ವಸಂತಗಳನ್ನು ಕಂಡ ಕನ್ನಡದ ಶ್ರೇಷ್ಠ ಸಾಹಿತಿ, ವಿಮರ್ಶಕ, ಭಾಷಣಕಾರರಾದ ಪ್ರೊ.ಅ.ರಾ.ಮಿತ್ರರವರ ಅವಲೋಕನ, ಅನಾವರಣ ಹಾಗು ಅಭಿನಂದನಾ ಸಮಾರಂಭಕ್ಕೆ ಇಡೀ ಖಿನ್ಚ ಸಭಾಂಗಣ ಹೌಸ್ ಫುಲ್ !
ಡಾ|| ರಂಜನಿ ವಾಸುಕಿಯವರ ಮಧುರವಾದ ಪ್ರಾರ್ಥನೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿತು. ಗಮಕ ವಾಚನ ಎಂದರೆ ವಿದುಷಿ ಗಂಗಮ್ಮ ಕೇಶವಮೂರ್ತಿ. ಈ ವಯಸ್ಸಿನಲ್ಲಿ ಅವರ ಶಾರೀರದಲ್ಲಿ ಇರುವ ಅರ್ಧ ಬಲ ನಮಗೆ ಇಡೀ ಶರೀರದಲ್ಲಿಲ್ಲ ! ಸೊಗಸಾದ ಪ್ರಸ್ತುತಿ ನೀಡಿದರು.
ತಮ್ಮ ಸಣ್ಣ ಕತೆಗಳ ಮೂಲಕ ಕನ್ನಡಿಗರ ಮನೆ ತಲುಪಿ ಯಶ ಸಾಧಿಸಿದವರು ಇವರು. ಆದರೆ ಇವರದು ಬಹಳ ದೊಡ್ಡ ಮನಸ್ಸು. ‘ಮಿತ್ರಾವರಣ’ದ ದೀಪ್ತಿಗಳಲ್ಲಿ ರಮಣಶ್ರೀ ಸಮೂಹ ಸಂಸ್ಥೆಯ ಕೊಡುಗೆ ಅಪಾರ.
ಬರಹಗಾರರು ಮತ್ತು ರಮಣಶ್ರೀ ಹೋಟೆಲ್ ಉದ್ಯಮದ ಮುಖ್ಯಸ್ಥರು ಎಸ್. ಷಡಕ್ಷರಿ ಅವರು ಪ್ರಸ್ತಾವನೆ ಮಾಡಿ ಮಿತ್ರ ಅವರೊಂದಿಗಿನ ಅನನ್ಯ ಸಂಬಂಧ ಹಂಚಿಕೊಂಡರು.
ಅ.ರಾ.ಮಿತ್ರರ ಕೃತಿ ಅವಲೋಕನ, ಅನಾವರಣ ಹಾಗು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|| ಚಂದ್ರಶೇಖರ ಕಂಬಾರ, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆ ನೀಡಿದ ಅ.ರಾ.ಮಿತ್ರರಿಗೆ ಶತ್ರುಗಳಿಲ್ಲ. ಮಿತ್ರರ ಹಾಸ್ಯಕ್ಕೆ ಸಿಕ್ಕ ಮನ್ನಣೆ ಅವರ ವಿದ್ವತ್ತಿಗೆ ಸಿಕ್ಕಿಲ್ಲ. ಅವರ ಒಡನಾಟಕ್ಕೆ ಬಂದವರೆಲ್ಲರೂ ಮಿತ್ರರೇ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ಸಾಹಿತಿ, ವಿಮರ್ಶಕರಾದ ಡಾ|| ಟಿ.ವಿ.ವೆಂಕಟಾಚಲ ಶಾಸ್ತ್ರೀ ಮತ್ತು ಶತಾವಧಾನಿ ಡಾ||ರಾ.ಗಣೇಶ್ ‘ಮಿತ್ರಾರ್ಜಿತ’ ಅಭಿನಂದನಾ ಗ್ರಂಥದ ಬಿಡುಗಡೆ ಮಾಡಿದರು. ಮಿತ್ರ ಅವರ ಬರಹಗಳಲ್ಲಿ ಅಕ್ಷರಗಳ ಚಮತ್ಕಾರ ಕಾಣಬಹುದಾಗಿದೆ. ಹಾಸ್ಯದ ಜೊತೆಗೆ ಸಾಮಾಜಿಕ ವಿಮರ್ಶೆಯನ್ನೂ ಅವರು ಕೃತಿಗಳಲ್ಲಿ ಮಾಡಿದ್ದಾರೆ. ಮಿತ್ರ ಅವರು ಪರಿಪೂರ್ಣ ಹಾಗೂ ಧ್ವನಿ ಪೂರ್ಣವಾದ ಕಾವ್ಯವನ್ನು ಸೃಷ್ಠಿಸಿದ್ದಾರೆ. ಆದರೆ ವಿಮರ್ಶಾ ಲೋಕವು ಅವರ ಗಂಭೀರ ಸಾಹಿತ್ಯಕ್ಕೆ ಅಷ್ಟಾಗಿ ಮನ್ನಣೆ ನೀಡದ ಪರಿಣಾಮ, ಇಲ್ಲಿ ಅವರಿಗೆ ಮತ್ತು ಅವರ ಸಾಹಿತ್ಯಕ್ಕೆ ಸೂಕ್ತ ಸ್ಥಾನಮಾನ ದೊರೆಯಲಿಲ್ಲ ಎಂದು ಡಾ|| ರಾ.ಗಣೇಶ್ ಬೇಸರ ವ್ಯಕ್ತ ಪಡಿಸಿದರು.
ಮೇಘದೂತ, ಛಂದೋಮಿತ್ರ ಕೃತಿಗಳ ಬಗ್ಗೆ ಡಾ|| ಗಣೇಶ್, ಮಹಾಭಾರತದ ಪಾತ್ರ ಸಂಗತಿಗಳು ಕೃತಿಯ ಬಗ್ಗೆ ಸೂರ್ಯಪ್ರಕಾಶ್ ಪಂಡಿತ್, ವಚನಕಾರರು ಮತ್ತು ಶಬ್ದಕಲ್ಪ ಕೃತಿಯ ಬಗ್ಗೆ ಸಿ.ಸೋಮಶೇಖರ, ಸ್ಮರಣೀಯರು ಟಿ.ಪಿ.ಕೈಲಾಸಂ ಬಗ್ಗೆ ವೈ,ವಿ.ಗುಂಡೂ ರಾವ್ , ಲಲಿತ ಪ್ರಬಂಧಗಳು ‘ಪ್ರೇಮನದಿಯ ದಡಗಳಲ್ಲಿ’ ಕೃತಿಯ ಬಗ್ಗೆ ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ ಹಾಗೂ ರಾಮಾಯಣ ಮಿತ್ರ ಕೃತಿಯ ಬಗ್ಗೆ ಡಾ||ಅರ್ಚನಾ ಮಾತನಾಡಿದರು.
ಇದರ ನಡುವೆ ಮಿತ್ರ ಅವರು ರಚಿಸಿದ ಎರಡು ಸ್ಕಿಟ್ ಕಲಾಗಂಗೋತ್ರಿಯ ಬಿ.ವಿ.ರಾಜಾರಾಮ್ ತಂಡ ಸೊಗಸಾಗಿ ಪ್ರಸ್ತುತಪಡಿಸಿದರು.
ಮಾತುಗಳ ಮುಲಕ ಫುಡ್ ಫಾರ್ ಥಾಟ್ ಆಯಿತು. ಫುಡ್ ಫಾರ್ ಟಮ್ಮಿ ವ್ಯವಸ್ಥೆ ಶ್ರೀ ಷಡಕ್ಷರಿಯವರು ಏರ್ಪಾಡು ಮಾಡಿದ್ದರು [ತಿಂಡಿ, ಊಟ, ಸಂಜೆ ಕುರುಕಲು].
ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ದಿಗ್ಗಜರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರೊ.ಅ.ರಾ.ಮಿತ್ರರ ಜೀವನ ಮತ್ತು ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು [ಸೂರ್ಯಂಗೇ ಟಾರ್ಚಾ ? ಅಂತ ಕೇಳ್ಬೇಡಿ!]
ಭೋಜನದ ನಂತರ ಗೀತ-ನೃತ್ಯ-ವೈದುಷ್ಯದ ಪ್ರದರ್ಶನವನ್ನು ವಿದುಷಿ ಡಾ|| ನಾಗವಲ್ಲಿ ನಾಗರಾಜ್, ನೃತ್ಯ ಗುರು ಡಾ|| ಶೋಭಾ ಶಶಿಕುಮಾರ್ ಮತ್ತು ಚಿತ್ರ ಕಲಾವಿದೆ ಮಂಜುಳಾ ಪ್ರೇಮಕುಮಾರ್ ಅದ್ಭುತವಾಗಿ ನಡೆಸಿಕೊಟ್ಟರು. ಹಾಡಿಗೆ ತಕ್ಕ ನೃತ್ಯ, ನೃತ್ಯಕ್ಕೆ ಅನುಗುಣವಾದ ಚಿತ್ರ ! ಬೈ ಒನ್ ಗೆಟ್ ಥ್ರೀ ಫ್ರೀ ಆಫರ್ ಹಾಗಿತ್ತು ಇದು!
ನರಸಿಂಹಮೂರ್ತಿ ಅವರು ಸಾರಸ್ವತ ಲೋಕಕ್ಕೆ ಮಿತ್ರ ನೀಡಿರುವ ಕಾಣಿಕೆ ಅಪಾರ ಎಂದರು. ಮಿತ್ರರೊಡನೆ ವಿದೇಶಿ ಪ್ರವಾಸದ ಕ್ಷಣಗಳನ್ನು ಹಂಚಿಕೊಂಡರು. ಪ್ರೊ.ಕೃಷ್ಣೇಗೌಡರು ಅ.ರಾ.ಮಿತ್ರ ಅವರ ಗುರು ಎಂದು ಅಕ್ಕ ಸಮ್ಮೇಳನಕ್ಕೆ ಹೋದಾಗಿನ ಪ್ರವಾಸವನ್ನು ನೆನೆದರು. ಮಿತ್ರರ ಹಿಂದೆ ದಿನವೆಲ್ಲ ಚಾಮರ ಹಿಡಿದು ನಿಲ್ಲಲ್ಲು ಸಿದ್ಧ ಎಂದರು.
ಸಂಜೆ ಸ್ನಾಕ್ಸ್ ಗೂ ಮುನ್ನ ಇಂದುಶ್ರೀ ಅವರ ಗೊಂಬೆಯೊಡನೆ ಮಾತಿನಿಂದ ಚಿನಕುರಳಿ ಸಿಡಿಸಿದರು.
ಚಹಾ ವಿರಾಮದ ನಂತರ ಡಾ||ಎಸ್ ಆರ್ ಲೀಲಾ ಅವರು ಅಭಿನಂದನಾ ನುಡಿಗಳನ್ನಾಡುತ್ತಾ ಇದೊಂದು ಅಪೂರ್ವ ಕಾರ್ಯಕ್ರಮ ಎಂದು ಹೇಳಿ ಅ.ರಾ.ಮಿತ್ರರು ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ ಎಂದರ್ಥದಲ್ಲಿ ಮಾತನಾಡಿದರು.
ಹೆಸರಾಂತ ಕನ್ನಡ ಬರಹಗಾರ ಮತ್ತು ದಾರ್ಶನಿಕನಾಗಿರುವ ಡಿ.ವಿ. ಗುಂಡಪ್ಪ ಅವರಿಗೆ ಆಪ್ತರಾಗಿದ್ದ ನಾಡೋಜ ಡಾ|| ಎಸ್ ಆರ್ ರಾಮಸ್ವಾಮಿಯವರು ಅಭಿನಂದನಾ ಭಾಷಣ ಮಾಡಿ ಸಜ್ಜನರಲ್ಲಿ ಸಜ್ಜನ ಮನೋಧರ್ಮದ ಅ.ರಾ.ಮಿತ್ರ ಎಂದರು.
ಸಂಜೆ ಪ್ರೊ. ಅ.ರಾ.ಮಿತ್ರ ದಂಪತಿಗಳಿಗೆ ಗಣ್ಯರು ಸನ್ಮಾನ ಮಾಡಿದರು. ಸಭೆಯಲ್ಲಿ ಆತ್ಮತೃಪ್ತಿ ಕಾಣಿಸಿತು, ಕರತಾಡನ ಕೇಳಿಸಿತು.
ಸಭೆಯನ್ನುದ್ದೇಶಿಸಿ ಸಾರ್ಥಕ್ಯದ ಭಾವದಿಂದ ಎರಡೇ ಮಾತುಗಳನ್ನಾಡಿದರು ಶ್ರೀ ಮಿತ್ರರು. ಕಾರ್ಯಕ್ರಮದ ಉಸ್ತುವಾರಿಗಳಾಗಿದ್ದ ಶ್ರೀ ಅಣುಕು ರಮಾನಾಥ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಅಗಾಧತೆ ಕಂಡು ಜನರು ಸುಸ್ತುವಾರಿಗಳಾದದ್ದಂತೂ ದಿಟ !




