Quantcast
Channel: Life – Rambling with Bellur
Viewing all articles
Browse latest Browse all 122

ಅಪರಂಜಿ ಚಾಳಿ-ಸಾ

$
0
0

ಅಪರಂಜಿ ಚಾಳಿ-ಸಾ
ರಚನೆ: ರಾಂಕಿ ಬೆಳ್ಳೂರ್

ಕೊರವಂಜಿ ಕಾಡಿಗೆ ಸಾಗಿದಳು ಅವಳಿಗಾದಾಗ ಇಪ್ಪತ್ತೈದು
ಅಪರಂಜಿಗೆ ಈಗಿನ್ನು ತುಂಬಿತು ಮೂವತ್ತಾರು ಪ್ಲಸ್ ಐದು
ಅಂದು ಕೊರವಂಜಿ ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ
ಇಂದು ಅಪರಂಜಿಯ ಓದುಗರಲ್ಲಿರುವರು ಅನೇಕ ರಾಜಕಾರಿಣಿ || 1 ||

ಅಂದು ಹಾಸ್ಯದ ಕಾರಂಜಿಯ ಬೆಲೆ ಎರಡಾಣೆ ಇಂದ ಮುಂದಾಯಿತು ನಾಲ್ಕಾಣೆ
ಇಂದು ಅಪರಂಜಿಯನ್ನು ಕೊಂಡು ಓದುತ್ತಿಲ್ಲ ಏಕೆ?…ನಾಕಾಣೆ !
ಸದಾಕಾಲ ನಗೆಗಡಲಲ್ಲಿ ಮುಳುಗಿರಲು ಇಷ್ಟ ಎಮಗೆ
ಕೊರವಂಜಿ ಅಪರಂಜಿ ಟ್ರಸ್ಟ್ ಮೇಲೆ ಅಪಾರ ಟ್ರಸ್ಟ್ ನಮಗೆ || 2 ||

ಬಣ್ಣ ಬಣ್ಣದ ನಗೆಲೇಖನ ಹೊತ್ತು ತಂದ ಕೊರವಂಜಿಯ ಹುಟ್ಟುಹಬ್ಬ
ನಾಡೆಲ್ಲವು ಬಣ್ಣಗಳಿಂದ ಓಕುಳಿಯ ಆಡುವ ಕಾಮನಹಬ್ಬ
ಶ್ರಾವಣ ಮಾಸದಲ್ಲಿ ಜನಿಸಿದಳು ಅಪರಂಜಿ
ಇಂದಿಗೂ ಬೀರುತಿಹಳು ತಿಳಿನಗೆಯ ಕಾರಂಜಿ || 3 ||

ಕೊರವಂಜಿ ಅಪರಂಜಿಗೆ ಅಂದು ತಿಳಿಹಾಸ್ಯವ ಕೊಟ್ಟಿದ್ದು ಸುನಂದ
ಡಾಕ್ಟರ್ ಶಿವರಾಂ ಲೇಖನ ಓದುವುದೇ ಮಹದಾನಂದ
ಅಂದಿಗೆ ಇದ್ದದ್ದು ಕುಹಕಿಡಿಗಳು ಉರಿಗಾಳು
ನಮ್ಮ ನಿಮ್ಮಲ್ಲಿಹುದು ಇಂದು ಹಾಸ್ಯದ ಹುರಿಗಾಳು || 4 ||

ರಾಶಿ-ಕಸ್ತುರಿ-ಲಕ್ಷ್ಮಣ್-ಕೈಲಾಸಂ
ಒಬ್ಬೊಬ್ಬರೂ ಹಾಸ್ಯದಲ್ಲಿ ಜಸ್ಟ್ ಆಸಂ
ಕೊರವಾವಲೋಕನ ಸಮಾಜದ ಏರುಪೇರುಗಳುಳ್ಳ ಲೇವಡಿಯ ಕಾಲಂ
ಅಪರಂಜಿಯನ್ನು ಓದಲು ನೋಡಬೇಕೇ ರಾಹುಕಾಲಮ್ !? || 5 ||

ಕೊರವಂಜಿಯ ಯಶಸ್ಸಿನಲ್ಲಿ ಭಾಗಿಗಳು ಕೇಫ-ಆ ರಾ ಸೇ-ರಾಮಿ-ದಾಶರಥಿ
ಕೊರವಂಜಿಯನ್ನು ಹುಮ್ಮಸ್ಸಿನಿಂದ ಪೋಷಿಸಿದರು ಅನೇಕ ಮಹಾರಥಿ
Punchಗೆ ಪಂಚ್ ಕೊಟ್ಟ ಪುಸ್ತಕ ಕೊರವಂಜಿ
Punಚ ಕಜ್ಜಾಯಗಳನ್ನೊಳಗೊಂಡಿದೆ ನಮ್ಮ ಅಪರಂಜಿ || 6 ||

ಕೊರವಂಜಿಗೆ ಹಾಕಿದರು ಸೇತುರಾಮ ಶಿವರುದ್ರರು ರಾಜರತ್ನದ ಹಾರ
ನಗುವೇ ಸಹಜಧರ್ಮ ಎನ್ನುವುದೇ ಜೀವನದ ಸಾರ
ಅಂದಿಗೂ ಇಂದಿಗೂ ಹಾಸ್ಯದ ಹೂರಣದ ಅಂಕಣ
ಅಪರಂಜಿ ಕಟ್ಟಿರುವಳು ನಮ್ಮನ್ನು ರಂಜಿಸಲು ಕಂಕಣ || 7 ||

ಅಪರಂಜಿಗೆ ಬರಹಗಳನ್ನು ಕೊಟ್ಟಿದ್ದಾರೆ ಹಲವರು
ಚುಟುಕ-ಅಣಕವಾಡು-ವ್ಯಂಗ್ಯ ಚಿತ್ರ ಕಳುಹಿಸಿದ್ದಾರೆ ಅನೇಕರು
ಸಂಪಾದಕರು-ಬರಹಗಾರರು-ಓದುಗರು ಅಪರಂಜಿಗೆ ಬೆಸ್ಟ್
ಮುದ್ರಕರು-ಟ್ರಸ್ಟಿಗಳು-ಆಡಳಿತ ವರ್ಗ ನಡೆಸುವರು ನಗೆ ಫೆಸ್ಟ್ || 8 ||

ಅಪರಂಜಿಗೆ ಈಗ ನಲವತ್ತೊಂದರ ಸಂಪುಟ ಹನ್ನೆರಡನೇ ಸಂಚಿಕೆ
ಇದನ್ನು ಕೊಂಡು ಓದುವವರು ಹೆಚ್ಚಲಿ, ಆಗಲಿ ಇನ್ನಷ್ಟು ಹಂಚಿಕೆ
ಅಪರಂಜಿ ಹೊರತರಲು ಬೇಕು ಹಲವು ವಿಭಾಗಗಳಲ್ಲಿ ಮುತುವರ್ಜಿ
ಅಪರಂಜಿ ಓದದಿದ್ದರೆ ನಮಗೆ ಆಗುವುದು ಅಲರ್ಜಿ || 9 ||

ಪಾಸಿಟಿವ್ ಆಗಿರಲು ನಮಗೆ ಬೇಕೇಬೇಕು ಅಪರಂಜಿಯ ನಗೆ-ಟಿವ್ ಟಾನಿಕ್
ಜೋರಾಗಿ ನಕ್ಕಾಗ ಆಗುವ ಹರ್ಷೋದ್ಗಾರವೇ ಸೂಪರ್ ಸೋನಿಕ್
ಅಪರಂಜಿಯ ಚಿಲುಮೆ ಹರಡಲಿ ಒಳನಾಡಿನಲ್ಲೂ
ಅವಳ ಒಲುಮೆ ಪಸರಿಸಲಿ ಹೊರನಾಡಿನಲ್ಲೂ || 10 ||

ಹಾಸ್ಯವನ್ನೊಳಗೊಂಡಿರುವ ಅಪರಂಜಿಯೇ ಪವಿತ್ರ ಗ್ರಂಥ
ಕನ್ನಡಿಗರಿಗೆಂದಿಗೂ ಇದು ನಮ್ಮದೇ ಸ್ವಂತ
ಲೋಕ ಕಲ್ಯಾಣಕ್ಕಾಗಿ ಅಪರಂಜಿ ನಡೆಸುವಳು ಹಾಸ್ಯೋತ್ಸವ
ಕ್ಷಣ ಕ್ಷಣವೂ ನಕ್ಕು ನಲಿದು ಸಂಭ್ರಮಿಸಬಹುದು ಈ ನಿತ್ಯೋತ್ಸವ || 11 ||

ಅಪರಂಜಿಯಿಂದ ನಗೆ ಸೂಸಿದೆ ರಾಶಿ ರಾಶಿ
ಹಾಸ್ಯದಿಂದಲೇ ಬದುಕಿಹುದು ಜೀವರಾಶಿ
ನಗು ಒಂದಿದ್ದರೆ ಸಾಕು… ಎಲ್ಲರೂ ಆಗ ಮಿತಭಾಷಿ
ತಿಳಿಹಾಸ್ಯ ಭರಿತ ಅಪರಂಜಿಯ ಓದುತ್ತಿದ್ದರೆ ಅದೇ ಹಾಸ್ಯಕಾಶಿ || 12 ||

ಅಪರಂಜಿಯನ್ನು ಮನೆ-ಮನಗಳೊಳಗೆ ಬರಮಾಡಿಕೊಂಡೆವು
ಮುಂದಿನ ಸಂಚಿಕೆ ಬರುವುದನ್ನೇ ಕಾದುನಿಂತೆವು
ದಿನವೂ ಪಠಿಸಿರಿ ಈ ಅಪರಂಜಿ ಚಾಳಿ-ಸಾ
ತಿಳಿನಗೆಯ ಕಾರಂಜಿಯನ್ನು ಆಶೀರ್ವದಿಸಬೇಕು ನಮಗೆ ಹಾಸ್ಯದೊಡೆಯ ವಿಘ್ನೇಶ || 13 ||

*** Aparanji Chaalee-sa by Ramki Bellur ***


Viewing all articles
Browse latest Browse all 122

Trending Articles