ಅಣ್ಣಾವ್ರ ಕಟ್ ಔಟ್ ನೋಡ್ತಾ ಕಳೆದು ಹೋದ್ವಿ !
ರಾಮ್ಕಿ ಬೆಳ್ಳೂರ್
1985. ಮೂರನೇ ಕ್ಲಾಸ್ ಪರೀಕ್ಷೆ ಬರೆದಾಗಿತ್ತು. ಬೇಸಿಗೆ ರಜಾ ಶುರು ಆಗಿತ್ತು. ನಮ್ಮ ಚಿಕ್ಕಮ್ಮ [ತಾಯಿ ತಂಗಿ] ಇದ್ದದ್ದು ಪೂನಾದಲ್ಲಿ. ಅವರ ಕುಟುಂಬದವರು – ಅಂದರೆ ನಮ್ಮ ಚಿಕ್ಕಪ್ಪ, ಚಿಕ್ಕಮ್ಮ, ಮಗಳು, ಮಗ ಎಲ್ಲರೂ ಬೆಂಗಳೂರಿಗೆ ಬಂದಿದ್ರು ರಜಕ್ಕೆ. ದೊಡ್ಡ ಕುಟುಂಬ… ನಮ್ಮ ಚಿಕ್ಕಪ್ಪನ ಅಣ್ಣ, ಮೂವರು ತಮ್ಮಂದ್ರು, ಅವರ ಹೆಂಡತಿ, ಮಕ್ಕಳು…ಒಟ್ಟು ಇಪ್ಪತ್ತು. ಅವರೆಲ್ಲರೂ ಮೈಸೂರಿಗೆ ಟೂರ್ ಹಾಕಿದ್ರು. ಜೊತೆಗೆ ನಾನೂ ಹೋಗೋದು ಅಂತ ತೀರ್ಮಾನ ಮಾಡಿದ್ಲು ನನ್ನ ಚಿಕ್ಕಮ್ಮ. ನನ್ನ ಬಗ್ಗೆ ಕಾಳಜಿ, ಪ್ರೀತಿ ನನ್ನ ತಾಯಿಗಿಂತ ನನ್ನ ಚಿಕ್ಕಮ್ಮಂದೇ ಎರಡ್ ಕೈ ಜಾಸ್ತಿ…ಈಗ್ಲೂ ಸಹ.
ಮೈಸೂರಿಗೆ ಹೋಗಿ ಇಳಿದ್ವು. ದಾಸಪ್ರಕಾಶದಲ್ಲಿ ಊಟ. ರಮಣೀಯ ಸ್ಥಳಗಳ ನೋಟ. ಒಂದು ಮೆಟಡೋರ್ ಬುಕ್ ಮಾಡಿ ಅದರಲ್ಲಿ ನಮ್ಮ ಮೈಸೂರು ಪ್ರದಕ್ಷಿಣೆ. ಮೆಟಡೋರ್ ಹಿಂಭಾಗ ಒಂದು ಚೌಕವಾದ ಜಗದಲ್ಲಿ ನಾವು ಮಕ್ಕಳೆಲ್ಲ ಕೂತಿದ್ವಿ. ಅಂಬಾ ವಿಲಾಸ. ಲಲಿತ್ ಮಹಲ್. ಅರಮನೆ ಮೇಲೆ ಅರಮನೆ ನೋಡಿದ್ದೇ ನೋಡಿದ್ದು.
ಮಧ್ಯಾಹ್ನ ಊಟಕ್ಕೆ ಮುನ್ನ ಜಗನ್ ಮೋಹನ್ ಪ್ಯಾಲೇಸ್ ನೋಡಿ ಸಂಜೆ ಕೆ.ಆರ್.ಎಸ್ ಅಂತ ಪ್ಲಾನ್ ಹಾಕಿದ್ದು ಕಿವಿಗೆ ಬಿತ್ತು. ಬಿಸಿಲು ಝಳಕ್ಕೆ ಕಣ್ಣು ಎಳೀತಿತ್ತು. ನಾನು ಜಗನ್ ಮೋಹನಕ್ಕೆ ಬರಲ್ಲ…ಮೆಟಡೋರಲ್ಲೆ ಉಳೀತೀನಿ ಅಂದೆ. ನಮ್ಮ ಚಿಕ್ಕಮ್ಮನ ಮಗ “ನಾನೂ ಇವನ ಜೊತೇನೆ ಇರ್ತಿನಿ” ಅಂದ. ಸರಿ..ಹಿಂಬಾಗದಲ್ಲೇ ಮಲಗಿ ಬಿಟ್ವಿ. ಸ್ವಲ್ಪ ಹೊತ್ತಿನ ಮೇಲೆ ಕಣ್ ಬಿಟ್ ನೋಡಿದ್ರೆ, ಮೆಟಡೋರ್ ಯಾವುದೋ ಮೆಕಾನಿಕ್ ಶಾಪ್ ಹತ್ತಿರ ನಿಂತಿದೆ. ಡ್ರೈವರ್ ಕಾಣಿಸ್ತಿಲ್ಲ. ಎಡಕ್ಕೆ ಕಿಟಕಿಯಿಂದ ಬಗ್ಗಿ ಮೇಲ್ ನೋಡ್ತೀನಿ…! ನಮ್ ಅಣ್ಣಾವ್ರ ಕಟ್ ಔಟ್ ! ‘ಅದೇ ಕಣ್ಣು’ ಚಿತ್ರದ್ದು. ಅಪ್ಪ – ಮಗನ ನೂರಡಿ ಕಟ್ ಔಟ್, ಸ್ಟಾರ್ !…
“ಲೋ, ಏನ್ ಮಾಡ್ತಿದೀವಿ ನಾವ್ ಮೆಟಡೋರ್ ಒಳಗೆ… ಬಾ ಕಥೆ ಹೇಳ್ತಿನಿ” ಅಂತ ಹೊರಕ್ಕೆ ಇಳಿದಿದ್ದೆ…ನನ್ನ ತಮ್ಮನಿಗೆ
ಡಾ. ರಾಜ್ ಸ್ಟಾರ್, ಪೋಸ್ಟರ್, ಕಟ್ ಔಟ್ ಎಲ್ಲ ತೋರಿಸಿ…”ರಾಜಣ್ಣ ಡಬಲ್ ಆಕ್ಟಿಂಗ್..ಇವನೇ ಅಪ್ಪ…ಹೆಂಡತಿಗೆ ಕಪಾಳಕ್ಕೆ ಹೊಡೆದಾಗ ಅವಳು ಸತ್ತು ಹೋಗ್ತಾಳೆ, ಮಗ ಇರಲ್ಲ… ಮಗ ಬರೋಕ್ಕೆ ಮುಂಚೇನೆ ಅವಳನ್ನು ಹೂತಾಗ್ ಬಿಡ್ತಾರೆ… ಮಗ ಕಾರ್ ರೇಸಿಂಗ್ ಚಾಂಪಿಯನ್…” ಹೀಗೆ ಕಥೆ ಮುಂದುವರೆಸಿಕೊಂಡು ಇಂಟರ್ವಲ್ ತನಕ ಬಂದೆ… “ಮಗನಿಗೆ ಕಣ್ಣು ಹೋಯಿತು.. ಕಮಲಾ ಢಮಾರ್, ಆಮೇಲೆ ರಾಮಯ್ಯ ಢಮಾರ್, ಪೊಲೀಸ್ ಢಮಾರ್..” ಅಂತ ಹೇಳ್ತಾ ಹಿಂದೆ ತಿರುಗಿ ಡ್ರೈವರ್ ಬಂದು ಕೂತಿದಾನ ಅಂತ ಮೆಟಡೋರ್ ಕಡೆ ತಿರುಗ್ತೀನಿ, ಗಾಡಿ ಢಮಾರ್! ಗಾಡಿ ಹೊರಟು ಹೋಗಿದೆ !!
ಹೋದ್ರೆ ಹೋಯ್ತು… ಸಿನಿಮಾ ಕಥೆ ಮುಗಿಸಿಬಿಟ್ಟು ನೋಡೋಣ ಬಿಡು ಅಂತ ಮುಂದುವರೆಸಿದೆ… “ಮಗ ರಾಜಕುಮಾರ್ ಕಾಂಟಾಕ್ಟ್ ಲೆನ್ಸ್ ಹಾಕ್ಕೊಂಡು ಅಪ್ಪ ರಾಜಕುಮಾರ್ ಮುಂದೆ ಬಂದು ನಿಂತಾಗ…” ನನ್ನ ತಮ್ಮ ಅಳೋಕ್ಕೆ ಶುರು ಮಾಡಿಬಿಟ್ಟ… “ಲೋ ಈಗಲೇ ಕಥೇಲಿ ಥ್ರಿಲ್ ಇರೋದು” ಅಳಬೇಡವೋ ಅಂತ ಹೇಳಿದ್ರೂ ಉ ಹೂಂ …ಅಳು ಹೆಚ್ತಿದೆ.. “ಸರಿ ಹೋಗ್ಲಿ ಆಮೇಲ್ ಹೇಳ್ತಿನಿ ಬಾ” ಅಂತ ಓಡಕ್ಕೆ ಶುರು ಮಾಡಿದ್ವಿ.
ಸುಮ್ನೆ ಓಡ್ತಾ ಇರೋದು ನೋಡಿ ಒಬ್ಬ ಆಂಟಿ “ಯಾಕ್ರೋ…ಅವ್ನು ಅಳ್ತಿದಾನೆ, ಇಬ್ಬರು ಓಡ್ತಿದೀರಲ್ರೋ…ಎಲ್ಲಿಗೆ? ಅಪ್ಪ ಅಮ್ಮ ಎಲ್ಲಿ?” ಅಂತ ಕೇಳಿದ್ರು… ಆಗ ನಾನು “ಆಂಟಿ, ತಪ್ಪಿಸಿಕೊಂಡ್ ಬಿಟ್ಟಿದೀವಿ…ಅಲ್ಲಿ ಅಣ್ಣಾವ್ರ ಕಟ್ ಔಟ್ ನೋಡ್ತಿದ್ವಿ ರಂಜಿತ್ ಟಾಕೀಸ್ ಹತ್ರ ..ಗಾಡಿ ಹೊರಟು ಹೋಗಿದೆ” ಅಂದಾಗ ಅವರು ಕೇಳಿದ್ರು “ಮೈಸೂರಿನವರೇನೋ ನೀವು?”. “ಇಲ್ಲ, ಬೆಂಗಳೂರು” ಅಂದೆ.
“ಎಲ್ಲಿ ಇಳ್ಕೊಂಡಿದೀರೋ ?”
“ಅರುಣ್ ಲಾಡ್ಜ್ !”
“ಗೊತ್ತು ಬನ್ನಿ…” ಅಂತ ಕರೆಕೊಂಡು ಹೋದ್ರು ನಮ್ಮಿಬ್ಬರನ್ನು.
ಲಾಡ್ಜ್ ತಲುಪಿದ್ದಾಯಿತು. ಸ್ಪೈರಲ್ ಮೆಟ್ಲು ಹತ್ತುಕೊಂಡು ಮ್ಯಾನೇಜರ್ ರೂಮ್ ಒಳಗೆ ಬಂದು ಕೂತ್ವಿ.
ಆ ಆಂಟಿ ಮ್ಯಾನೇಜರ್ ಹತ್ರ ಏನೋ ಮಾತಾಡುದ್ರು…. ನನ್ನ ತಮ್ಮ ಅಳೋದು ನೋಡಿ ಮ್ಯಾನೇಜರ್ ಬಾಗಿಲ ಬಳಿ ಇರೋ ಹುಡುಗನಿಗೆ “ಎರಡು ಟೊರಿನೊ” ಅಂತ ಹೇಳಿದ್ರು. ಎರಡು ನಿಮಿಷ ಆದಮೇಲೆ ಟೇಬಲ್ ಮೇಲೆ ಒಂದು ಥಮ್ಸಪ್ ಒಂದು ಟೊರಿನೊ ತಂದಿಟ್ಟ. ಆ ಮ್ಯಾನೇಜರ್ ನನ್ನ ಕಡೆ ಥಮ್ಸಪ್ ತಳ್ಳಿದ್ರು…ನನ್ನ ತಮ್ಮನಿಗೆ ಟೊರಿನೊ..
ಅರ್ಧ ಕುಡಿಯೋ ಹೊತ್ತಿಗೆ ಫಿಲ್ಮಿ ಸ್ಟೈಲ್ ಅಲ್ಲಿ ಸ್ಪೈರಲ್ ಮೆಟ್ಟಿಲು ಹತ್ಕೊಂಡು ಮೊದಲು ನಮ್ಮ ಚಿಕ್ಕಪ್ಪ…ಆಮೇಲೆ ಅವರ ತಮ್ಮಂದ್ರು… ಒಬ್ಬೊಬ್ಬರೇ ಬಂದು ಎಲ್ ಹೊರಟು ಹೋಗಿದ್ರೋ? ಅಂತ ಏರು ಧ್ವನಿಯಲ್ಲಿ ಗದರಕ್ಕೆ ಶುರು ಮಾಡಿರು. ನಮ್ಮ ಚಿಕ್ಕಮ್ಮ ಬಂದು ಅಳುತಿದ್ದ ಅವಳ ಮಗನ್ನ, ಥಮ್ಸಪ್ ಕುಡೀತಿದ್ದ ನನ್ನನ್ನ ಸಮಾಧಾನ ಮಾಡಿದ್ಲು. ಟೊರಿನೊ-ಥಮ್ಸಪ್ ಕುಡೀತಿದ್ದ ನಮ್ಮನ್ನ ಬಾಟಲಿ ನಿಂದ ಬೇರ್ಪಡಿಸಿ, ಮ್ಯಾನೇಜರ್ ಗೆ ಥ್ಯಾಂಕ್ಸ್ ಹೇಳಿ ದೊಡ್ಡೋರೆಲ್ರೂ, ರೂಮ್ ಕಡೆ ಕರ್ಕೊಂಡು ಹೊರಟ್ರು…ನನಗೆ ಅಯ್ಯೋ ಥಮ್ಸಪ್ ಅರ್ಧ ಉಳಿದಿತ್ತಲ್ಲ ಅನ್ನೋ ಕೊರಗು…
ಸಂಜೆ ಕೆ.ಆರ್.ಎಸ್. ವೀಕ್ಷಣೆ. ಆದರೆ ನನಗೂ ನನ್ನ ತಮ್ಮನಿಗೂ ಬರೀ ಕಾಲುಗಳೇ ಕಾಣಿಸ್ತಿತ್ತು. ಏಕೆಂದರೆ ಮಧ್ಯಾಹ್ನದ ಫಿಯಾಸ್ಕೊ ಆದ ಮೇಲೆ ನಮ್ಮಿಬ್ಬರಿಗೂ ಹಿಂದೆ-ಮುಂದೆ, ಎಡ-ಬಲ ಎರಡೆರಡು ಬೌನ್ಸರ್ಸ್… ಪ್ರಾಯಶಃ ಸಿನಿತಾರೆಯರಿಗಿಂತ ಮುನ್ನ ಬೌನ್ಸರ್ಸ್ ಹೊಂದಿದ್ದು ಸಿನಿ ಅಭಿಮಾನಿಗಳಾದ ನಾವೇ ಏನೋ !!